ಧಂಗ
10ನೆಯ ಶತಮಾನದ ಕೊನೆಯಲ್ಲಿ ಬುಂದೇಲ್ ಖಂಡವನ್ನಾಳುತ್ತಿದ್ದ ಚಂದೇಲ ಸಂತತಿಯ ದೊರೆ ; ಅನೇಕ ಯುದ್ಧಗಳನ್ನು ಗೆದ್ದು ಖ್ಯಾತಿವೆತ್ತಿದ್ದ ವೀರ ಯಶೋವರ್ಮನ ಮಗ.  ಇವನ ರಾಜಧಾನಿ ಮಹೋಬ.  ಈ ಸಂತತಿಯ ದೊರೆಗಳಲ್ಲೆಲ್ಲ ಧಂಗ ಅತ್ಯಂತ ಪರಾಕ್ರಮಿಯೆಂದು ಕೀರ್ತಿ ಗಳಿಸಿದ್ದ.  ಧಂಗ ತಂದೆಯಿಂದ ಪಡೆದ ರಾಜ್ಯವನ್ನು ತನ್ನ ಪರಾಕ್ರಮದಿಂದ ವಿಸ್ತರಿಸಿದ.  ಮಧ್ಯ ಭಾರತದಲ್ಲಿ ಇವನ ರಾಜ್ಯ ತಕ್ಕಮಟ್ಟಿಗೆ ವಿಶಾಲವಾಗಿತ್ತು.  ಖಜುರಾಹೋದ ಕೆಲವು ದೊಡ್ಡ ದೇವಸ್ಥಾನಗಳನ್ನು ಈತ ಕಟ್ಟಿಸಿದ.  ಘಜಿನಿಯ ಸಬಕ್ತಗೀನ್ ಭಾರತದ ಮೇಲೆ ದಾಳಿ ನಡೆಸಿದಾಗ ಅವನನ್ನು ಹಿಮ್ಮೆಟ್ಟಿಸಲು ಪಂಜಾಬಿನ ದೊರೆ  ಜಯಪಾಲನ ನೇತೃತ್ವದಲ್ಲಿ ರಜಪೂತರು ರಚಿಸಿಕೊಂಡಿದ್ದ ಒಕ್ಕೂಟದಲ್ಲಿ ಇವನು ಸೇರಿದ್ದ.   ಕುರ್ರಮ್  ಕಣಿವೆಯ ಬಳಿಯಲ್ಲಿ ಈ ಹಿಂದೂ ದೊರೆಗಳು ಸೋಲನ್ನನುಭವಿಸಿದರು.  ಇವನು ನೂರು ವರ್ಷಗಳ ಕಾಲ ಬದುಕಿದ್ದನೆಂದೂ ಅನಂತರ ಅಲಹಾಬಾದಿನಲ್ಲಿ ಗಂಗಾನದಿಯಲ್ಲಿ ಮುಳುಗಿ ಪ್ರಾಣ ನೀಗಿದನೆಂದೂ ಹೇಳಲಾಗಿದೆ.  ಘಜಿóನಿ ಮಹಮೂದನ ದಾಳಿಯನ್ನು ಎದುರಿಸಿ ಹೋರಾಡಿದ ಚಂದೇಲ ರಾಜ ಗಂಡ ಈತನ ಮಗ.
(ಎಂ.ಎನ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ